ದೇವಗರಿಗೆ
ಗಟಿಫೆರೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ನೇರಳೆಮಾವು, ದೀವರಿಗೆ, ಕಾಡುಜೀರಕ ಪರ್ಯಾಯನಾಮಗಳು, ಗಾರ್ಸೀನಿಯ ಟಿಂಕ್ಟೋರಿಯ ಇದರ ವೈಜ್ಞಾನಿಕ ಹೆಸರು.  ಇದು ಭಾರತ ಮತ್ತು ಮಲಯಗಳ ಮೂಲನಿವಾಸಿ, ಸಿಕ್ಕಿಮ್, ಖಾಸಿಯ ಬೆಟ್ಟಗಳು ಮತ್ತು ಅಂಡಮಾನ್ ದ್ವೀಪಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. 

	ಇದು 3-6 ಮೀ  ಎತ್ತರಕ್ಕೆ ಹರಡಿಕೊಂಡು ಬೆಳೆಯುವುದು.  ಕಾಂಡ ಗಟ್ಟಿಯಾಗಿಯೂ ಒರಟಾಗಿಯೂ ಇದೆ.  ಎಲೆಗಳು ದೊಡ್ಡವು; ಇವುಗಳ ಬಣ್ಣ ಹೊಳೆಯುವ ಹಸಿರು. ಕಾಂಡ ಮತ್ತು ಎಲೆಗಳನ್ನು ಗಾಯಗೊಳಿಸಿದರೆ ಹಳದಿ ಬಣ್ಣದ ಹಾಲು ಬರುತ್ತದೆ. ಹೂಗಳು ಚಿಕ್ಕ ಗಾತ್ರದವು. ರೆಂಬೆಗಳ ತುದಿಯಲ್ಲಿ ಗೊಂಚಲಾಗಿ ಅರಳುವುವು.  ಕಾಯಿಯ ತುದಿ ಮಾವಿನಕಾಯಿಯ ಮೂತಿ ಇದ್ದಹಾಗೆ ಇದೆ.  ಕಾಯಿಯಲ್ಲಿ 1-4 ಬೀಜಗಳುಂಟು. 

	ದೇವಗರಿಗೆಯನ್ನು ಬೀಜಗಳಿಂದ ಅಭಿವೃದ್ಧಿ ಮಾಡಲಾಗುವುದು.  

	ಕಾಂಡ ತೊಗಟೆ ಮತ್ತು ದೋರೆಹಣ್ಣುಗಳಿಂದ ಬಣ್ಣ ತಯಾರಿಸಲಾಗುತ್ತದೆ.  ಮಾಗಿದ ಹಣ್ಣು ತಿನ್ನಲು ಯೋಗ್ಯ. ಹಣ್ಣಿನ ತಿರುಳನ್ನು ಸಾರು ಮಾಡಲು ಉಪಯೋಗಿಸುವುದುಂಟು. ಹಣ್ಣಿನಿಂದ ವಿನಿಗರ್ ತಯಾರಿಸುವುದಿದೆ.  ಪಕ್ವವಾದ ಹಣ್ಣಿನಿಂದ ಗ್ಯಾಂಬೋಜಿಯ ಎನ್ನುವ ಅಂಟನ್ನು ಪಡೆಯಬಹುದು.
(ಎಸ್.ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ